CUSTOM SEARCH

ಸಾಮಾಜಿಕ ಜವಾಬ್ದಾರಿಯ ಇನ್ನೊಂದು ಮುಖವನ್ನು ಮರೆತ ದೃಷ್ಯ ಮಾಧ್ಯಮಗಳು

ಇಂದಿನ ಬಹುತೇಕ ಕನ್ನಡ ನ್ಯೂಸ್ ಚಾನಲ್ ಗಳು ನ್ಯೂಸ್ ಮಾಡುವ ಭರಾಟೆಯಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ಅರಿಯದೆ ವ್ಯಾಪಾರಿ ಮನೋಭಾವದಲ್ಲಿ ಸುದ್ದಿ ಹರಡುವುದು ಅದರಿಂದ ಸಮಾಜಕ್ಕೆ ಯಾವ ರೀತಿಯಲ್ಲಿ ಒಳಿತು ಮತ್ತು ಕೆಡಕು ಆಗುತ್ತಿದೆ, ಅದನ್ನು ವೀಕ್ಷಿಸುವ ಎಲ್ಲಾ ವಯಸ್ಸಿನ ವೀಕ್ಷಕರಿಗೆ ಯಾವ ರೀತಿಯಲ್ಲಿ ಮನ: ಪರಿವರ್ತನೆ ಯಾಗುತ್ತಿದೆ, ಸುದ್ದಿಗಾಗಿ ಬಲಿಯಾದ ಜನರ ಖಾಸಗಿ ಮತ್ತು ವೈಯುಕ್ತಿಕ ಜೀವನಗಳು ಯಾವ ರೀತಿ ಬಲಿಯಾಗುತ್ತಿವೆ ಎಂಬುದನ್ನು ಅರಿತೂ ಅದನ್ನೇ ಮುಂದುವರಿಸಿ ತಮ್ಮ ಸುದ್ದಿ ಮಾಧ್ಯಮಕ್ಕೆ ನೋಡುಗರನ್ನು ಸೆಳೆಯುತ್ತಿರುವ ಮಾಧ್ಯಮಗಳು ಯಾಕೆ ಸಮಾಜ ಸುಧಾರಣಾ ಅಂಗವಾಗಿ ಕೆಲಸ ಮಾಡುತ್ತಿಲ್ಲಾ ಎಂಬ ಅಲೋಚನಾ ಪರಿ ಇಂದು ಎಲ್ಲಾ ಪ್ರಜ್ಞಾವಂತರಲ್ಲೂ ಮೂಡುತ್ತಿದೆ.

ಇಂದು ಬಹುತೇಕ ಎಲ್ಲಾ ಕುಟುಂಬಗಳಲ್ಲಿ ಒಂದಿಲ್ಲೊಂದು ಕಲಹ, ಮನಸ್ಥಾಪ, ಅನುಮಾನ, ಹೀಗೆ ಅನೇಕ ಬಿರುಕುಗಳು ಮನೆಯಲ್ಲಿ ತಂದೆ ಮಗನಿಗಿರಬಹುದು, ತಾಯಿ ಮಗನಿಗಿರಬಹುದು, ಅತ್ತೆ ಸೊಸೆಯರಿಗಿರಬಹುದು, ಗಂಡ ಹೆಂಡತಿಗಿರಬಹುದು, ಅವುಗಳು ಶಾಶ್ವತವಲ್ಲ ಎಲ್ಲಿಯೋ ಕೆಲವು ಕ್ರೈಂ ಹಂತದವರೆಗೆ ಹೋಗಿರುತ್ತವೆ. ಆದರೆ ಬಹುತೇಕ ವ್ಯಾಜ್ಯಗಳು ಅಲ್ಲಿ ಅಲ್ಲಿಯೇ ಹಿರಿಯರ ರಾಜೀ ಸಂಧಾನಗಳಲ್ಲಿ ಬಗೆಹರಿದಿರುತ್ತವೆ. ಅಂತಹ ಸಂಸಾರಿಕ ಜೀವನದಲ್ಲಿ ನುಸುಳುವುದು ಮಾಧ್ಯಮಗಳಲ್ಲಿ ಅತಿರೇಕಕ್ಕೆ ಹೋಗಿದೆ. ಇಲ್ಲಿ ಯಾರ ಪರವಾಗಿ ನ್ಯೂಸ್ ಮಾಡಬೇಕು ಯಾರ ವಿರುದ್ದವಾಗಿ ನ್ಯೂಸ್ ಮಾಡಬೇಕು ಎಂಬುದರಲ್ಲೂ ಹಣದ ಸುಲಿಗೆ ನಡೆಯುತ್ತಿದೆ. ಹಣ ನೀಡುವಷ್ಟು ಕೋಟ್ಯಾಧಿಪತಿ ಆಗಿದ್ದವನ ಸಂಸಾರಿಕ ಜೀವನದಲ್ಲಿ ಒಂದು ಕೂದಲಿನ ಅಂಶ ಸಿಕ್ಕರೆ ಮುಗಿಯಿತು ಅದನ್ನು ಇಲ್ಲ ಸಲ್ಲದನ್ನು ಸೇರಿಸಿ ಅದರ ಚರ್ಚೆ ಮತ್ತು ಹರಟೆಯನ್ನು ಪ್ರಾರಂಭಿಸಿ ಬಹು ದೊಡ್ಡ ರಣರಂಗವಾಗಿಸುತ್ತಾರೆ. ಕೋಪದಲ್ಲಿ ಇರುವ ಗಂಡ/ಹೆಂಡತಿಯ ಹೇಳಿಕೆಯನ್ನು ಸೆರೆಹಿಡಿದು ಅದನ್ನೇ ತೋರಿಸಿ ತೋರಿಸಿ ಆ ಸಂಸಾರದ ಬಿರುಕನ್ನು ದೊಡ್ಡ ಕಂದಕ ಮಾಡುತ್ತಾರೆ. ಆ ಸಂಸಾರ ಆಗಿರುವ ಕಹಿ ಘಟಣೆಯನ್ನು ಮರೆತು ಮುಂದೆ ಬಾಳಲು ಅವಕಾಶ ನೀಡಲು ಮುಂದಾಗದೆ ಈ ದೃಷ್ಯ ಮಾಧ್ಯಮಗಳು ವರ್ತಿಸಿರುವ ನಿರ್ದೇಶನಗಳು ಬಹಳವೇ ಇವೆ. ಎಂ.ಎಲ್.ಎ ರಘುಪತಿ ಭಟ್ ರವರ ಸಂಸಾರದ ವಿಚಾರವನ್ನೇ ನೋಡೋಣ ಅವರು ಮತ್ತು ಅವರ ಪತ್ನಿಯ ನಡುವೆ ಯಾವ ರೀತಿಯ ಮನಸ್ಥಪವಿತ್ತೋ ಅದು ಕೆಲವು ತಿರುವು ಪಡೆದುಕೊಂಡಾಗ ಅದನ್ನೇ ತನಿಖಾಧಿಕಾರಿಗಳ ಮಾಧರಿಯಲ್ಲಿ ಏನೋ ಆಗೋಗಿದೆ ಎಂಬುವ ರೀತಿಯಲ್ಲಿ ಅನೇಕ ಅನೈತಿಕತೆಗಳನ್ನು ಕಟ್ಟಿ ಪ್ರಾಸಾರ ಮಾಡಿದ್ದು ಇಲ್ಲಿನ ಕನ್ನಡ ದೃಷ್ಯ ಮಾಧ್ಯಮ, ಪಾಪ ಆ ಹೆಂಗಸು ಮನೆಗೆ ಮರಳಿ ಬಾರದಂತೆ ಆದ ಘಟಣೆಗೆ ಮುಖ್ಯ ಕಾರಣ ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ. ಇನ್ನು ಚಿರಂಜೀವಿ ಮಗಳು ಮದುವೆಯನ್ನು ಸುದ್ದಿ ಮಾಧ್ಯಮಗಳಲ್ಲಿ ಹರಡಿ ಬಹು ದೊಡ್ಡ ಪ್ರಸಾರ ಪಡೆದ ಮಾಧ್ಯಮಗಳು ಜಿರಂಜೀವಿಯ ಮನಸ್ಸನ್ನು ಘಾಯಗೊಳಿಸಿದ್ದಲ್ಲದೆ ಸಣ್ಣ ವಿಚಾರವನ್ನು ಬೀದಿ ನಾಟಕ ಮಾಡಿಬಿಟ್ಟರು. ಇನ್ನು ದರ್ಶನ್ ಮನೆಯಲ್ಲಿನ ಘಟಣೆಯನ್ನು ಅದೇ ರೀತಿಯಲ್ಲಿ ಪ್ರಸಾರ ಮಾಡಿದ ಮಾಧ್ಯಮಗಳು ಒಟ್ಟಾರೆ ಜನರಿಗೆ ಸಂದೇಶ ನೀಡಿದ್ದಾದರೂ ಏನು? ನಮ್ಮ ಮುಂದೆ ಬರುವ ಅನೇಕ ಕಕ್ಷಿದಾರರನ್ನು ಹಿಂದೆ ಮಾಧ್ಯಮಗಳ ಬಳಿ ತಮ್ಮ ನೋವು ಹೇಳಿಕೊಳ್ಳಿ ಏನಾದರೂ ಸಹಾಯ ಆದೀತು ಎಂದು ಕಳಿಸಿರುವುದು ಉಂಟು ಆದರೆ ಬಡ ಕಕ್ಷಿದಾರರು ಬಂದು ಹೇಳಿದ್ದೇನೆ ಗೊತ್ತೆ ಸಾರ್ ಹತ್ತು ಸಾವಿರದಿಂದ ೨ ಲಕ್ಷದವರೆಗೆ ಕೇಳ್ತಾರೆ ಸರ್ ನ್ಯೂಸ್ ಮಾಡೋಕೆ, ಬರೀ ಒಂದ್ಸಾರಿ ತೋರಿಸೋಕೆ ಒಂದು ರೇಟು, ಮೈನ್ ಹೆಡ್ಲೈನ್ ಮಾಡೋಕೆ ಒಂದ್ರೇಟು, ಪದೇ ಪದೇ ತೋರಿಸೋಕೆ ಒಂದ್ರೇಟು ನ್ಯೂಸ್ ಕಲೆಕ್ಟ್ ಮಾಡೋವಿನಿಂದ ಹಿಡಿದು ದೃಷ್ಯ ಮಾಧ್ಯಮದ ಎಲ್ಲಾ ಕೆಲಸಗಾರರ ಬದಲಾಗಿರುವ ಹಣಕಾಸು ಪರಿಸ್ಥಿತಿ ಆಸ್ತಿ ಅಂತಸ್ತುಗಳನ್ನು ಆಧಾಯ ತೆರಿಗೆ ಇಲ್ಲಾಖೆ ರೈಡು ಮಾಡಿ ಶೋಧಿಸಿದರೆ ತಿಳಿಯುತ್ತೆ ಇಲ್ಲಿನ ಅನೈತಿಕತೆಯ ಮಟ್ಟ. ಈ ಹೊಲಸು ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿರುವ ಮಾಧ್ಯಮದವರ ಮೇಲೆ ಕೇವಲ ವಕೀಲರಿಗೆ ಮಾತ್ರ ಕೋಪ ಇದೆ ಎಂದರೆ ತಪ್ಪು, ಇವರ ಬಗ್ಗೆ ಸತ್ಯವನ್ನು ಅರಿತಿರುವ ಸಾಮಾನ್ಯ ಪ್ರಜೆಯಲ್ಲಿಯೂ ಹೊರಗೆ ಹೇಳಿಕೊಳ್ಳಲಾಗದ ಅಸಹನೆ ಗರಿ ಕೆದರಿ ನಿಂತಿದೆ. ಪೋಲೀಸರು ಮಾಧ್ಯಮದವರ ಜೊತೆ ಸೇರಿ ಹಣ ಮಾಡಲು ನಿಂತಿದ್ದಾರೆ ಎಂದರೆ ತಪ್ಪಾಗಲಾರದು, ಒಳ್ಳೆ ಮಿಕ ಪೋಲೀಸ್ ಠಾಣೆಯ ಮೆಟ್ಟಲು ಹತ್ತಿತು ಅನ್ನಿ ಅಲ್ಲಿ ಮಾಧ್ಯಮಗಳ ಮಧ್ಯವರ್ತಿಗಳಿಗೆ ನ್ಯೂಸ್ ಹೋಗುತ್ತೆ ಅಲ್ಲಿ ಎದುರುದಾರರನ್ನು ಬ್ಲಾಕ್ ಮೇಲ್ ಮಾಡಿ ಹಣ ಪೀಕಲಾಗುತ್ತೆ, ಅಲ್ಲಿಗೆ ಆ ನ್ಯೂಸ್ ಸತ್ತಂತೆ ಲೆಕ್ಕ, ಅಲ್ಲಿ ಹಣ ಹಂಚಿಕೆ ಆಗುತ್ತೆ. ಇಲ್ಲ ಪೋಲೀಸ್ ಠಾಣೆಗೆ ಬಂದವರೆ ಹಣ ಸುರಿದರೆ ಇನ್ನು ಮನೆಮನೆಯ ರಂಜನೆ ಆಗುತ್ತೆ ಯಾವುದೇ ರೀತಿಯ ನ್ಯೂಸ್ ಆಗಲು ಇಂದು ಮಾಧ್ಯಮ ಮತ್ತು ಪೋಲೀಸರ ನಡುವಿನ ಸಮಾಜಿಕ ವಿರೋದಿ ನಂಟು ಮುಖ್ಯ ಕಾರಣವಾಗಿದೆ. ಎಸ್ಟೋ ಕೇಸುಗಳಲ್ಲಿ ಇವರುಗಳ (ಪೋಲೀಸ್ + ಮಾಧ್ಯಮ) ವಿರುದ್ದ ತಿರುಗಿ ಬೀಳುವ ಎದೆಗಾರಿಕೆ ಯಾರೂ ಪ್ರಧರ್ಶಿಸಿಲ್ಲ, ಎಲ್ಲರಿಗೂ ಯಾಕೆ ಬೇಕು ಸಾರ್ ನಮ್ಮದೇ ಆದ ಗಂಜಿ ಮಾರ್ಗಕ್ಕೂ ಸಂಚಕಾರ ಆಗುವ ರೀತಿ ಮಾಡ್ತಾರೆ ಎಂದು ಹೆದರಿರುವ ಜನರೇ ಹೆಚ್ಚಿದ್ದಾರೆ.

ವಿದೇಶಗಳಲ್ಲಿ ಯಾವುದೇ ಕುಟುಂಬದಲ್ಲಿ ಸದಸ್ಯನೋರ್ವ ಎತ್ತರದ ದ್ವನಿಯಲ್ಲಿ ಮಾತನಾಡಿ ಇತರರಿಗೆ ನೋವುಂಟು ಮಾಡಿದ ಮರುಕ್ಷಣವೇ ಆ ಕುಟುಂಬ ಮಾನಸಿಕ ತಜ್ಞನ ಬಳಿ ಸಲಹೆಗೆ ಹೋಗುತ್ತೆ ಅಲ್ಲಿ ಟ್ರೀಟ್ ಮೆಂಟ್ ತಗೋತಾರೆ, ಆದರೆ ನಮ್ಮಲ್ಲಿ ಯಾವ ರೀತಿಯ ಪರಿಸರ ಉಂಟಾಗುತ್ತಿದೆ ಮನೆ ಮನೆಯಲ್ಲಿ ಜಗಳವಾದ ನಂತರ ನಾನು ಕ್ರೈಂ ಸ್ಟೋರಿ ಅಲ್ಲಿ ಬರೋ ಹಾಗೆ ಮಾಡ್ತೀನಿ ಅನ್ನೋ ದಮ್ಕಿ ಹೆಚ್ಚಾಗುತ್ತಿದೆ, ಟಿ.ವಿ೯ ಗೆ ಹೋಗ್ತೀನಿ ನಿನ್ನ ಮಾನ ಹರಾಜಾಗ್ತೀನಿ ಎಸ್ಟಾದರೂ ಖರ್ಚಾಗಲಿ ನಿನ್ನ ಬಿಡಲ್ಲ ಅನ್ನುವ ಮಾತು ಹೆಚ್ಚುತ್ತಿದೆ. ಮಾನಸಿಕ ತಜ್ಞನ ಬಳಿ ಹೋಗಿ ಬಗೆ ಹರಿಸಿಕೊಳ್ಳ ಬೇಕಾದ ಮನಸ್ಸುಗಳು ಮಾಧ್ಯಮದ ಮೊರೆ ಹೊಕ್ಕು ವಿಚಿತ್ರವಾಗಿ ಶಾಶ್ವತವಾಗಿ ಕೊನೆ ಆಗಿರುವ ಕಂದಕಗಳನ್ನು ನಾವು ನೋಡುತ್ತಾ ನಮ್ಮಲ್ಲಿಯೇ ಮಾಧ್ಯಮದ ಬಗ್ಗೆ ಅಸಹನೆ ಮತ್ತು ಅಸಹಕಾರ ಬೆಳೆದಿರುವುದಕ್ಕೆ ಮಾಧ್ಯಮದ ಕುಚೋದ್ಯದ ನದವಳಿಕೆಯೇ ನೇರ ಕಾರಣವಾಗಿದೆ.

ಹಿಂದೆ ಮಾಧ್ಯಮಗಳಲ್ಲಿ ಹೆಣ್ಣಿನ ಸ್ಥನ ದೃಷ್ಯ ಬಂತೆಂದರೆ ಅದನ್ನು ಬ್ಲರ್ ಮಾಡಿ ತೋರಿಸುವ ಮಟ್ಟ ಕಾದುಕೊಂಡಿದ್ದರು, ಆದರೆ ಇಂದು ವಿಕೃತಕಾಮಿಗಳು, ಸ್ಯಾಡಿಷ್ಟ್ ಗಳು, ಕೆಲವು ಮಾಧ್ಯಮಗಳ ಮುಖ್ಯಸ್ಥರಾಗಿ ಹೋಗಿದ್ದಾರೆ. ಒಬ್ಬ ದೂರ್ತ ನೀಲಿ ಚಿತ್ರವನ್ನು ಸದನದಲ್ಲಿ ನೋಡಿದ ಅದನ್ನು ಕೋಟ್ಯಾಂತರ ಜನರಿಗೆ ಬ್ಲರ್ ಮಾಡದಂತೆ ತೋರಿಸಿದ ದೂರ್ತ ವಿಶ್ವೇಶ್ವರ ಭಟ್ಟ, ಹಮೀದ್ ಪಾಳ್ಯ ರಂಗನಾಥ್ ಭರದ್ವಾಜ್ ಇವರು ಮಾಧ್ಯಮದಲ್ಲಿ ಹೆಸರು ಮಾಡಲು ಬಳಕೆ ಯಾಗಿದ್ದು ಅನೇಕ ಒಳ್ಳೆ ಕೆಲಸಗಳೇ ಇರಬಹುದು ಆದರೆ ಅವರೇ ಪ್ರಾಸಾರ ಮಾಡಿರುವ ನೀಲಿ ಚಿತ್ರದ ಸಂಬೋಗ ಪ್ರಕ್ರಿಯೆಯ ದೃಷ್ಯಾವಳಿ ಮನೆ ಮನೆಯಲ್ಲಿ ಪ್ರಸಾರವಾಗಿ ಮಕ್ಕಳ ಪ್ರಶ್ನೆಗೆ ಉತ್ತರಿಸಲಾಗದ ತಂದೆ ತಾಯಿಯರ ಪಾಡು ಇವರಿಗೆ ಇನ್ನೂ ತಿಳಿದಿಲ್ಲ, ಅಂತಹ ಚಿತ್ರಾವಳಿಗಳನ್ನು ಮಾರುಕಟ್ಟೆಯಲ್ಲೆಲ್ಲಾ ಸಿ.ಡಿ ಮಾಡಿ ಹಂಚಿರುವುದೇ ಅಲ್ಲದೆ ಇಂಟರ್ ನೆಟ್ ನಲ್ಲಿಯೂ ಶಾಶ್ವತವಾಗಿ ಬಿತ್ತರಿಸಿ ಅಲ್ಲಿನ ಜಾಹೀರಾತು ವರಮಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ವಿಕೃತಕಾಮಿಗಳು, ಸ್ಯಾಡಿಷ್ಟ್ ಗಳು ಮಾಡುವ ಕೆಲಸವಲ್ಲದೆ ಸಭ ಸಮಾಜದ ನಾಯಕರು ಮಾಡುವ ಕೆಲಸವೆ.

ಕ್ರೈಂ ಸ್ಟೋರಿ, ಕ್ರೈಂ ಡೈರಿ, ಕ್ರೈಂ ಬೀಟ್, ಟಾಪ್ ಕಾಪ್ ಇನ್ನೂ ಅನೇಕ ಹೆಸರುಗಳಲ್ಲಿ ಅಪರಾಧ ಜಗತ್ತನ್ನು ವೈಭವೀಕರಿಸಲಾಗುತ್ತಿದೆ. ಯಾವ ಸಾಕ್ಷಿ ಕ್ರೈಂ ಜಾಗದಲ್ಲಿ ಬಿಟ್ಟರೆ ಯಾವ ರೀತಿ ಪೋಲೀಸರು ಉಪಯೋಗಿಸಿ ಪತ್ತೆ ಹಚ್ಚುತ್ತಾರೆ, ಯಾವ ರೀತಿಯಲ್ಲಿ ಅಪರಾಧಿ (ಆರೋಪಿ) ಸಿಕ್ಕಿಹಾಕಿಕೊಂಡ, ಯಾವ ರೀತಿಯ ವಿಧಾನವನ್ನು ಅನುಸರಿಸಿ ಅಪರಾಧ ಮಾಡಿದ, ಯಾವ ರೀತಿಯಲ್ಲಿ ಯಾವ ಯಾವ ಹಂತದಲ್ಲಿ ಅಪರಾಧ ಆಯಿತು, ಇವೆಲ್ಲಾ ತನಿಖಾ ಹಂತಗಳನ್ನು ಪೋಲೀಸರು ನ್ಯಾಯಾಲಯಕ್ಕೆ ತಿಳಿಸುವ ಮೊದಲೇ ಮಾಧ್ಯಮಗಳಿಗೆ ಸೋರಿಸುತ್ತಾರೆ ಇದರ ಜೊತೆ ಸ್ವಲ್ಪ ಒಗ್ಗರಣೆ, ಉಪ್ಪು, ಮೆಣಸು, ಖಾರ, ಸ್ವೀಟು, ಕಹಿ ಸೇರಿಸಿ ಸಿದ್ದವಾಗುತ್ತೆ ನೋಡುಗನ ಕಣ್ಣಿಗೆ ಮನರಂಜನೆ, ಯಾವ ಮಟ್ಟದಲ್ಲಿ ಇರುತ್ತೆ ಅಂದರೆ ಅಲ್ಲಿ ನ್ಯಾಯಾಧೀಶರ ಬದಲಿಗೆ ಇವರೇ ತೀರ್ಪನ್ನು ಪ್ರಕಟಿಸಿರುತ್ತಾರೆ. ಬರೀ ಪೋಲೀಸರ ಹೇಳಿಕೆ ಮತ್ತು ಇವರ ಏಕಪಕ್ಷೀಯ ತನಿಖೆ (ಅದು ಎಸ್ಟೋ ಕಡೆ ಎಸ್.ಎಸ್.ಎಲ್.ಸಿ ಫ಼ೇಲಾದ ಕ್ಯಾಮರಾ ಕಣ್ಣುಗಳಿಂದ ಸಂಗ್ರಹಿತವಾದ ತನಿಖೆ) ಯಿಂದ ಸಂಗ್ರಹವಾದ ಮಾಹಿತಿಯಲ್ಲಿ ಜನರ ಮನಸ್ಸಿಗೆ ಅವನು/ಅವಳು ಅಪರಾಧಿ ಅನ್ನುವ ಮಟ್ಟಕೆ ಬೇರೂರಿಸುತ್ತಾರೆ. ಇದು ಕಾನೂನಿನ ಪ್ರಕಾರ ತಪ್ಪು ಆಗುತ್ತಿದೆಯಾದರೂ ಈ ಬಗ್ಗೆ ಅಲೋಚನೆ ಮಾಡುವವರ ಸಂಖ್ಯೆ ಇಳಿಯುತ್ತಿದೆ. ಹಾಲಪ್ಪನವರ ಕೇಸನ್ನೇ ತೆಗೆದುಕೊಳ್ಳಿ ಆರೋಪ ಮಾಡಿರುವ ಹೆಣ್ಣು ತನ್ನ ಮೇಲೆ ಅತ್ಯಾಚಾರವಾಗಿದೆ ಎನ್ನುತ್ತಾರೆ, ಭಾರತೀಯ ದಂಡ ಸಂಹಿತೆ ಕಲಂ ೨೨೮ಎ ಅಡಿಯಲ್ಲಿನ ಕಾನೂನಿನ ಪ್ರಕಾರ ಅಂತಹ ಹೆಣ್ಣು ಮಕ್ಕಳ ಚಿತ್ರವನ್ನು ಮಾಧ್ಯಮದಲ್ಲಿ ಪ್ರಕಟಿಸಬಾರದು ಪ್ರಕಟಿಸಿದರೆ ೨ ವರ್ಷ ಸಜೆ, ಆದರೆ ಇತ್ತೀಚೆಗೆ ಪ್ರಸಾರವಾದ ನೀಲಿ ಚಿತ್ರದ ಬಗ್ಗೆ ಒಂದು ಸುದ್ದಿ ಮಾಡಿದ ಸುವರ್ಣ ವಾಹಿನಿ ಅದರಲ್ಲಿ ಆ ಮಹಿಳೆಯ ಚಿತ್ರವನ್ನು ನೇರವಾಗಿ ತೋರಿಸುತ್ತಾರೆ. ಯಾಕೆ ಇವರಿಗೆ ಐ.ಪಿ.ಸಿ ಕಾನೂನು ಅನ್ವಯವಾಗುವುದಿಲ್ಲವೆ, ಯಾಕ್ ಲಾ ಏನ್ ಲಾ ಎಂಬ ಅಹಂಕಾರ ಇವರ ತಲೆಯಲ್ಲಿ ಹರಿದಾಡುತ್ತಿದೆಯೆ. ನೀಲಿ ಚಿತ್ರ ತೋರಿರುವ ಸುವರ್ಣ ವಾಹಿನಿಯ ಎಲ್ಲಾ ಸಂಬಂದಿತರು ಐಪಿಸಿ ಕಲಂ ೨೯೩ ರಲ್ಲಿ ಮತ್ತು ಇನ್ಫರ್ ಮೇಷನ್ ಟೆಕ್ನಾಲಜಿ ಕಾಯ್ದೆ ಕಲಂ ೬೭ ರಲ್ಲಿ ಅಪರಾಧವನ್ನು ಒಂದೊಂದು ಮನೆಯಲ್ಲಿ ಮನೆಮಕ್ಕಳು ನೋಡಿದಾಗ ಒಂದೊಂದು ಅಪರಾಧವಾಗಿದೆ ಆರು ಕೋಟಿ ಕನ್ನಡಿಗರು ಕಂಪ್ಲೇಂಟ್ ಹಾಕಿದರೆ ಒಂದೊಂದು ಅಪರಾಧಕ್ಕೂ ೨ ಲಕ್ಷ ರೂ ದಂಡವಲ್ಲದೆ ಐದು ವರ್ಷ ಸಜೆ ಅನುಭವಿಸಬೇಕಿರುತ್ತೆ. ಇಂಡೀಸೆಂಟ್ ರೆಪ್ರಸೆಂಟೇಷನ್ ಆಫ಼್ ಉಮೆನ್ಸ್ ಕಾಯ್ದೆ ಅಡಿಯಲ್ಲಿ ಯೂ ಇದು ಅಪರಾಧವಾಗುತ್ತೆ. ಇರುವ ಒಂದು ಜನ್ಮ ಸಾಲದು ಈ ಶಿಕ್ಷೆಯ ಪರಿಯನ್ನು ಅನುಭವಿಸಲು. ಏನ್ ಲಾ ಯಾಕ್ ಲಾ ಎಂಬ ಅಹಂ ನಲ್ಲಿರುವ ವಿಶ್ವೇಶ್ವರ ಭಟ್ಟರು ಪಾಕಿಸ್ತಾನಿ ಪ್ರಜೆಯೋ ಭಾರತೀಯ ಪ್ರಜೆಯೋ ಕಾಣದಾಗಿದೆ. ಭಾರತೀಯ ಪ್ರಜೆಯೇ ಆಗಿದ್ದರೆ ಇವರಿಗೆ ಈ ಕಾನೂನು ಅನ್ವಯಿಸದು ಎಂಬ ಸರ್ಕಾರಿ ವಿಶೇಷ ಕಾನೂನು ಜಾರಿಯಾಗಿದೆಯೇ ತಿಳಿಯದಾಗಿದೆ. ಕಾನೂನು ಜಾರಿಗೊಳಿಸಬೇಕಾದ ಪೋಲೀಸರು ಈ ಹೊಲಸು ಸಂಸ್ಕೃತಿಯನ್ನು ಬಿತ್ತರಿಸಿದ ಮಾಧ್ಯಮದವರೊಂದಿಗೆ ಷಾಮೀಲಾಗಿರುವ ಬಗ್ಗೆ ಇದಕ್ಕಿಂತಾ ಸಾಕ್ಷಿ ಬೇಕೆ.

ಮೊದಲಿಗೆ ಬಹಳ ಹಳೆಯ ಕಾನೂನಾದ ಭಾರತೀಯ ದಂಡ ಸಂಹಿತೆ ೧೮೬೦ ರ ಬಗ್ಗೆ ನೋಡೋಣ ಇಲ್ಲಿನ ಕಲಂ ೧೫೩ಎ ಮತ್ತು ೧೫೩ಬಿ ಅಡಿಯಲ್ಲಿ ಇರುವ ಪ್ರಕಾರ ಪ್ರಚೋದನಾತ್ಮಕವಾಗಿ ಹೇಳಿಕೆ, ಪ್ರಸಾರ, ಬರಹ ಮತ್ತು ಸನ್ನೆಯ ಮೂಲಕ ಎರಡು ವರ್ಗಗಳನ್ನು ಸಂಘರ್ಷಕ್ಕೆ ಇಳಿಸುವುದು, ಒಂದು ವರ್ಗಕ್ಕೆ ಕಾನೂನು ಮತ್ತು ಸಂವಿಧಾನದಲ್ಲಿ ಗೌರವ ಇಲ್ಲ ಎನ್ನುವುದು ಅಪರಾಧವಾಗುತ್ತದೆ. ಒಬ್ಬರ ಮಾನ ಹೋಗುವ ರೀತಿಯಲ್ಲಿ ನಡೆಸುವ ಮಾಧ್ಯಮ ಬರಹಗಳೂ ಕಲಂ ೪೯೯ ಮತ್ತು ೫೦೦ ರಲ್ಲಿ ಅಪರಾಧವಾಗುತ್ತದೆ, ಪ್ರಚೋದನಾತ್ಮಕವಾಗಿ ಪ್ರಸಾರಗಳನ್ನು ಮಾಡುವುದು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಸಾರ್ವಜನಿಕ ಹಿಂಸೆಗೆ ಕಾರಣವಾಗುವುದು ಅಪರಾಧವಾಗುತ್ತದೆ. ಇದು ೧೮೬೦ ರ ಕಾನೂನು ಈಗಲೂ ಜಾರಿಯಲ್ಲಿವೆ ಅವುಗಳನ್ನು ಮಾಧ್ಯಮ ಮಿತ್ರರು ಮರೆತಿರುತ್ತಾರೆ. ಕಾರಣ ಇವರು ಸೆಲ್ಫ್ ಪ್ರಕ್ಲೈಮ್ಡ್ ಲೋಕ್ ಪಾಲರು ಎನ್ನುವ ಮಟ್ಟದಲ್ಲಿ ಇವರ ವರ್ತನೆಯನ್ನು ಬೆಂಗಳೂರು ವಕೀಲರ ಮುಂದೆ ನಡೆದು ಕೊಂಡ ಬಗ್ಗೆ ಅಂತರ್ಜಾಲದಲ್ಲಿ ಜಗಾ ಜಾಹೀರಾಗಿದೆ.

ಇವರಿಗೆ ಕಾನೂನಿನಲ್ಲಿ ಅಂಕೆ ಇಲ್ಲವೆ ಕಂಡಿತ ಇದೆ. ಇವರು ಎಸಗಿರುವ ಅಪರಾಧಗಳಿಗೆ ಯಾರು ಬೇಕಾದರೂ ಕ್ರಿಮಿನಲ್ ಕಾನೂನು ಪ್ರಕ್ರಿಯೆಯನ್ನು ಜಾರಿಗೊಳಿಸಬಹುದು. ಒಬ್ಬೊಬ್ಬರು ಬಾದಿತರ ಮೇಲಿನ ಧೌರ್ಜನ್ಯಕ್ಕೆ ಒಮ್ದೊಂದು ಅಪರಾಧವಾಗುತ್ತದೆ, ಪ್ರಸಾರ ಮಾಡಿದ್ದು ಒಂದೇ ಬಾರಿಯಾದರೂ ನೋಡಿರುವ ಮತ್ತು ಬಾಧಿತರಾದ ಮಂದಿ ಬಹಳವೆ ಆಗಿರುತ್ತಾರೆ. ಪ್ರಸಾರ ಭಾರತಿ ಕಾಯ್ದೆ ಮತ್ತು ಪ್ರಸಾರ ಮಾಧ್ಯಮಗಳ ಸ್ವಯಂ ಘೋಷಿತ ನೀತಿ ಸಂಹಿತೆ ಅನ್ವಯ ಪ್ರಕಾರ ನ್ಯೂಸ್ ಮಾಡುವವರು ಏಕಪಕ್ಷೀಯ ನಿಲುವು ತಳಿಯುವುದು ಸಲ್ಲ ಎನ್ನುತ್ತದೆ. ಒಂದು ಘಟಣೆಯ ಬಗ್ಗೆ ಅಭಿಪ್ರಾಯಕ್ಕೆ ಬರುವ ಹಕ್ಕು ಅವರಿಗೆ ಇಲ್ಲ, ಕೇವಲ ವಾಸ್ತವಿಕತೆಯನ್ನು ಪ್ರಸಾರ ಮಾಡಬೇಕಷ್ಟೆ, ಕ್ರೈಂ ಜಗತ್ತನ್ನು ವೈಭವೀಕರಿಸುವುದು ಮಾಡಬಾರದು, ಲೈಂಗಿಕ ದೃಷ್ಯವನ್ನು ಪ್ರಸಾರ ಮಾಡಬಾರದು, ಸಾರ್ವಜನಿಕ ಶಾಂತಿಗೆ ಬಂಗತರುವಂತಹ ಪ್ರಚೋದಾನಾತ್ಮಕ ವಿಚಾರಗಳನ್ನು ಪ್ರಸಾರ ಮಾಡಬಾರದು, ಜಾತಿ ಮತ್ತು ಧರ್ಮ ಆಧಾರದಲ್ಲಿ ಪ್ರಚೋಧಾತ್ಮಕ ಬಾವನೆಗಳನ್ನು ಕೆದಕುವುದು ಮಾಡಬಾರದು, ಸ್ಟಿಂಜ್ ಆಪರೇಷನ್ ನಲ್ಲಿಯೂ ಜವಾಬ್ದಾರಿಯುತ ಪ್ರಸಾರ ಇರಬೇಕು ಎಂಬ ಅಂಶವೂ ಕಾನೂನಿನಲ್ಲಿದೆ. ಖಾಸಗಿ ಬದುಕಿನ ಬಗ್ಗೆ ಗೌರವ ಇರಬೇಕು ಎಂಬ ನೀತಿ ನಿಯಮಗಳನ್ನು ಇವರೇ ಘೋಷಿಸಿಕೊಂಡಿದ್ದಾರೆ. ಆದರೆ ಪ್ರತಿ ದಿನ ಎಲ್ಲಾ ಖಾಸಗಿ ಬದುಕುಗಳನ್ನು ಭಟ್ಟಾ ಬಯಲು ಮಾಡುತ್ತ ಹಿಂಸೆ ಮತ್ತು ಹಲ್ಲೆ ಪ್ರಕರಣಗಳನ್ನು ವೈಭವೀಕರಿಸುತ್ತ, ಒಬ್ಬ ಸ್ಕೂಲ್ ಮಾಸ್ಟರ್ ಲೈಂಗಿಕ ಹಲ್ಲೆ ಮಾಡಿದ ಎಂಬುದಕ್ಕೆ ಇಡೀ ಸ್ಕೂಲ್ ಮಾಸ್ಟರ್ ಗಳ ಮಾನ ಹರಾಜಾಗುತ್ತ, ಒಬ್ಬ ಸ್ವಾಮೀಜಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಎಂಬುದನ್ನು ವೈಭವೀಕರಿಸಿ ತಾಂತ್ರಿಕ್ ಸೆಕ್ಸ್ ಎಂಬ ವಿಚಾರದಲ್ಲಿ ಜನರಲ್ಲಿ ತಪ್ಪು ಬಾವನೆ ಕಲ್ಪನೆ ಬೀರುತ್ತ ಪುಕ್ಕಟ್ಟೆ ಮನರಂಜನೆಯಲ್ಲಿ ಅನೇಕ ಧಾರ್ಮಿಕ ಬಾವನೆಗಳನ್ನು ಕೆದಕುತ್ತ ಮುಂದಾಗಿರುವ ಮಾಧ್ಯಮಗಳು ತಮಗೆ ಸಾಮಾಜಿಕ ಜವಾಬ್ದಾರಿ ಇದೆ ಅನ್ನುವುದನ್ನೇ ಮರೆತು ಮುಂದಾಗಿ ಸಮಾಜವನ್ನು ಮಾತ್ರ ಇಬ್ಬಾಗಿಸುತ್ತಿದ್ದಾರಲ್ಲದೆ ಮನೆ ಮನೆಯನ್ನು ಸಂಸಾರವನ್ನು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತ ಕಾನೂನಿಗೆ ತಾವು ಅತೀಥರು ತಾವು ದೇಶವನ್ನೇ ಆಳುವ ಹಿಟ್ಲರ್ ಆಗಬಹುದು ಎಂಬ ಮನೋಸ್ಥಿತಿಯಲ್ಲಿರುವ ಕೆಲವು ಮಾಧ್ಯಮದವರು ಕಾನೂನು ಗೌರವಿಸುವುದು ಅಲ್ಲದೆ ಸಮಾಜ ಮುಖಿಯಾಗಿ ಇನ್ನಾದರೂ ಕೆಲಸ ಮಾಡುತ್ತಾರೆಯೇ ಕಾದು ನೋಡಬೇಕಿದೆ.

ಸುಪ್ರೀಮ್ ಕೋರ್ಟ್ ಮಾಧ್ಯಮಕ್ಕೆ ಆಗಿಂದಾಗ್ಗೆ ಹೇಳಿರುವ ಸಂವಿಧಾನಾತ್ಮಕ ಕಾನೂನು ಏನು -೧

ಮಾನ್ಯ ಜಸ್ಟೀಸ್ ಡಾ. ಮುಕುಂದಮ್ ಶರ್ಮಾ ಮತ್ತು ಜಸ್ಟೀಸ್ ಅನಿಲ್ ಆರ್ ದವೆ ಇವರಿದ್ದ ಸುಪ್ರೀಮ್ ಕೋರ್ಟಿನ ಮುಂದೆ ಬಂದಿದ್ದ ಸಂಜಯ್ ನಾರಾಯಣ್ ಮುಖ್ಯ ಸಂಪಾದಕರು ಹಿಂದುಸ್ತಾನ್ ಟೈಮ್ಸ್ ಕೇಸಿನಲ್ಲಿ ದಿನಾಂಕ ೩೦-೦೮-೨೦೧೧ ರಲ್ಲಿ ಪ್ರಕಟವಾದ ತೀರ್ಪಿನಲ್ಲಿ ಹೀಗೆ ಮಾನ್ಯ ನ್ಯಾಯಾಲಯ ಆದೇಶಿಸಿರುತ್ತದೆ ಮಾಧ್ಯಮದ ವರದಿಗಳು ಸಾರ್ವಜನಿಕರ ಮೇಲೆ ದೈಹಿಕವಾಗಿ ಮಾತ್ರ ಪ್ರಚೋದಿಸುವುದೇ ಅಲ್ಲದೆ ಮಾನಸಿಕವಾಗಿ ಪ್ರಭಾವವನ್ನು ಬೀರಬಲ್ಲದಾಗಿದೆ .. .. ಮಾಧ್ಯಮದವರ ಬಳಿಯಲ್ಲಿ ಬರುವ ಹೆಚ್ಚಿನ ಮಾಹಿತಿಯಿಂದ ಜವಾಬ್ದಾರಿಯು ಪ್ರಾರಂಬವಾಗುತ್ತದೆ, ಮಾಧ್ಯಮದವರು ಪರಿಶೀಲನೆ ಮಾಡದ ಸುಳ್ಳು ವರಧಿಗಳನ್ನು ಏಕಪಕ್ಷೀಯ ವರದಿಯನ್ನು ಮಾಡದಂತೆ ಎಚ್ಚರವಹಿಸಬೇಕಿರುತ್ತದೆ. .. .. .. ಸಂವಿಧಾನಿಕ ಹಕ್ಕನ್ನು ಭಾರತದ ಅಖಂಡತೆ ಮತ್ತು ಭದ್ರತೆಗೆ ದಕ್ಕೆ ಬರದರೀತಿಯಲ್ಲಿ ಸಾರ್ವಜನಿಕ ಶಾಂತಿಗೆ ದಕ್ಕೆ ಬರದ ರೀತಿಯಲ್ಲಿ, ಸಾರ್ವಜನಿಕ ಸಭ್ಯತೆಗೆ ಮತ್ತು ನೈತಿಕತೆಗೆ ದಕ್ಕೆ ಬರದ ರೀತಿಯಲ್ಲಿ, ನ್ಯಾಯಾಂಗ ನಿಂದನೆ ಆಗದಂತೆ, ಮತ್ತು ಮಾನ ಹಾನಿಯಾಗದಂತೆ ಸುದ್ದಿ ಪ್ರಸಾರ ಮಾಡುವುದು ಮಾಧ್ಯಮಗಳ ಆಧ್ಯ ಸಂವಿಧಾನಾತ್ಮಕ ಕರ್ತವ್ಯವಾಗಿರುತ್ತದೆ. ವ್ಯಕ್ತಿಯ ಮೇಲೆ ಮತ್ತು ಸಂಸ್ಥೆಗಳ ಮೇಲೆ ಆತುರ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದು ವ್ಯತಿರಿಕ್ತವಾದ ವರದಿಯನ್ನು ಆತುರವಾಗಿ ಪ್ರಕಟಿಸುವುದು ನಿಲ್ಲಿಸಬೇಕಿರುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

ಸುಪ್ರೀಮ್ ಕೋರ್ಟ್ ಮಾಧ್ಯಮಕ್ಕೆ ಆಗಿಂದಾಗ್ಗೆ ಹೇಳಿರುವ ಸಂವಿಧಾನಾತ್ಮಕ ಕಾನೂನು ಏನು-೨

೨೦೦೫ ರಲ್ಲಿ ಸುಪ್ರೀಮ್ ಕೋರ್ಟಿನ ಮುಂದೆ ಆಗಿರುವ ರಾಜೇಂದ್ರ ಸೈಲ್ ಕೇಸಿನ ತೀರ್ಪಿನಲ್ಲಿ ಜಸ್ಟೀಸ್ ವೈ.ಕೆ ಸಬರ್ ವಾಲ್ ಜಸ್ಟೀಸ್ ಟಿ. ಚಟರ್ಜಿ ರವರ ತೀರ್ಪಿನಂತೆ ಸಾರ್ವಜನಿಕ ಒಳತಿಗಾಗಿ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿರುತ್ತದೆ. ಸ್ವಾತಂತ್ರತೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು, ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು, ಈ ಸ್ವತಂತ್ರತೆಯನ್ನು ಬೇರೆ ಸಂಸ್ಥೆಗಳನ್ನು ವಿನಾಷಗೊಳಿಸುವುದಕ್ಕೆ ಉಪಯೋಗಿಸಬಾರದು. ಇಲ್ಲದ ವಿಚಾರಗಳನ್ನು ಸ್ಪೋಟಕರ ಸುದ್ದಿ ಮಾಡುವುದು ನಿಲ್ಲಬೇಕು ಎಂಬ ಸ್ವಷ್ಟ ಆದೇಶವಿರುತ್ತದೆ.ಸುಪ್ರೀಮ್ ಕೋರ್ಟ್ ಮಾಧ್ಯಮಕ್ಕೆ ಆಗಿಂದಾಗ್ಗೆ ಹೇಳಿರುವ ಸಂವಿಧಾನಾತ್ಮಕ ಕಾನೂನು ಏನು-೩

೨೦೦೯ ರಲ್ಲಿನ ದಿ ಪಬ್ಲಿಕ್ ಅಂಡ್ ಪ್ರವೇಟ್ ಪ್ರಾಪರ್ಟಿ ಡಿಸ್ಟ್ರಕ್ಷನ್ ಕೇಸಿನ ಲ್ಲಿನ ಸುಪ್ರೀಮ್ ಕೋರ್ಟಿನ ಮಹತ್ತರ ಮಾರ್ಗದರ್ಶನದಂತೆ ಸ್ಥಳೀಯ ಪೋಲೀಸ್ ಠಾಣೆಯು ಸಾರ್ವಜನಿಕ ಅಥವ ಪ್ರೈವೇಟ್ ಆಸ್ತಿಗಳ ನಾಷದ ಸಮಯದಲ್ಲಿ ವಿಡಿಯೋಗ್ರಫ಼ಿ ಮಾಡಿಸಬೇಕೆಂತಲೂ, .. .. .. .. ಸರ್ಕಾರ ಈ ಬಗ್ಗೆ ನಿಷ್ಕ್ರಿಯತೆ ತೋರಿದಲ್ಲಿ ಹೈಕೋರ್ಟ್ ಈ ಬಗ್ಗೆ ಕ್ರಮ ಕೈಗೊಂಡು ಯಾವ ಸಂಸ್ಥೆ ಈ ಆಸ್ತಿ ವಿನಾಷಕ್ಕೆ ಮುಂದಾಗಿದೆಯೋ ಅದನ್ನು ಸಂಪೂರ್ಣ ಹೊಣೆಗಾರರನ್ನಾಗಿಸಬೇಕೆಂತಲೂ ತಿಳಿಸಿರುತ್ತೆ .. .. .. ಫ಼ಾಲಿನಾರಿಮನ್ ವರದಿಯಂತೆ ಮಾಧ್ಯಮಗಳು ಸಾರ್ವಜನಿಕ ಟ್ರಸ್ಟಿಗಳಂತೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳಬೇಕು, ಅವರ ದ್ಯೇಯವೇನಿದ್ದರೂ ಸತ್ಯವನ್ನು ಹೊರಗೆಡವುದು ಆಗಿರಬೇಕು, ಏಕಪಕ್ಷೀಯ ವರದಿ ಮಾಡಬಾರದು, ತಟಸ್ಥ ನೀತಿಯಿರಬೇಕು, ಸೂಕ್ಷ್ಮ ವಿಚಾರಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು, ಕ್ರೈಂ ಮತ್ತು ಹಿಂಸೆಯನ್ನು ವರದಿ ಮಾಡಬೇಕಾದಾಗ ಜವಾಬ್ದಾರಿಯುತ ನಡವಳಿಕೆ ಇರಬೇಕು, ಸಾರ್ವಜನಿಕ ಬದ್ರತೆ ಮತ್ತು ಖಾಸಗಿ ವಿಚಾರಗಳಲ್ಲಿ ಚೆಲ್ಲಾಟವಾಡಬಾರದು ಎಂದು, ವೀಕ್ಷಕರಿಗೆ ಕೆಲವು ದೃಷ್ಯಗಳನ್ನು ತೋರಿಸುವಾಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿ ಮಕ್ಕಳು ಮತ್ತು ಸೂಕ್ಷ್ಮಿಗಳು ನೋಡದಂತೆ ಕ್ರಮವಹಿಸುವುದು, ಎಂಬ ವರದಿಯನ್ನು ಪುರಸ್ಕರಿಸಿದ ಶ್ರೇಷ್ಟ ನ್ಯಾಯಾಲಯ ನ್ಯೂಸ್ ಬ್ರಾಡ್ ಕ್ಯಾಸ್ಟಿಂಗ್ ಅಸೋಸಿಯೇಷನ್ ಗೆ ಮಾದರಿ ಮಾರ್ಗದರ್ಶನವನ್ನು ಕಾನೂನಿನ ರೀತಿಯಲ್ಲಿ ನ್ಯಾಯಾಲಯ ಜಾರಿ ಮಾಡಿರುತ್ತದೆ. ಈ ಬಗ್ಗೆ ಎನ್.ಬಿ.ಎ ನೀತಿ ನಿಯಮಗಳನ್ನೇನೋ ರೂಪಿಸಿದೆ ಆದರೆ ಅವರ ಸದಸ್ಯರಿಗೆ ಆ ಬಗ್ಗೆ ಗೌರವವಿಲ್ಲ ಯಾಕೆಂದರೆ ದೂರುಗಳಿಗೆ ವಾರ್ನ್ ಮಾಡುತ್ತಾರೆ ಹೊರತು ಗಣನೀಯ ಶಿಕ್ಷೆ ಇಲ್ಲ.


ಶ್ರೀಧರಬಾಬು ಎನ್.
ವಕೀಲರು, ತುಮಕೂರುNo comments:

CASE LAW ON LAND LAWS